Home Entertainmentʻಪಿಸ್ತೂಲ್ʼ ಟೈಟಲ್ ರಿಲೀಸ್ ಮಾಡಿದ ನಟ ವಸಿಷ್ಠ ಸಿಂಹ

ʻಪಿಸ್ತೂಲ್ʼ ಟೈಟಲ್ ರಿಲೀಸ್ ಮಾಡಿದ ನಟ ವಸಿಷ್ಠ ಸಿಂಹ

by shiv
0 comments
ಪಿಸ್ತೂಲ್.. (Pistol Movie) ಹೀಗೊಂದು ಹೆಸರಿನಲ್ಲಿ ಕನ್ನಡದ ಸಿನಿಮಾವೊಂದು ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ (Sandalwood) ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಪ್ರಬೀಕ್ ಮೊಗವೀರ್, ಈ ಬಾರಿ ‘ಪಿಸ್ತೂಲ್’ ಎಂಬ ಈ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರ ಮುಂದೆ ಹೇಳಲು ತಯಾರಿ ಮಾಡಿಕೊಂಡಿದ್ದಾರೆ. ಆತ್ಮ ಸಿನಿಮಾಸ್ ಬ್ಯಾನರಿನಲ್ಲಿ ಪ್ರಬೀಕ್ ಮೊಗವೀರ್ ಕಥೆ, ಚಿತ್ರಕಥೆ ಬರೆದು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವೇದ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ಪಿಸ್ತೂಲ್ ಸಿನಿಮಾದ ಸ್ಕ್ರಿಪ್ಟ್ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಪಿಸ್ತೂಲ್ ಚಿತ್ರದ ಟೈಟಲ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ನಟ ವಸಿಷ್ಠ ಎನ್. ಸಿಂಹ (Vasishta Simha) ಪಿಸ್ತೂಲ್ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಟ ವಸಿಷ್ಠ ಎನ್. ಸಿಂಹ, ‘ಈ ಸಿನಿಮಾದ ಹೆಸರು ಮತ್ತು ಪೋಸ್ಟರ್ ಎರಡೂ ಸಾಕಷ್ಟು ಕುತೂಹಲ ಮೂಡಿಸುವಂತಿದೆ. ಸಿನಿಮಾದಲ್ಲಿ ತಂಡ ಹೊಸಥರದ ವಿಷಯವನ್ನು ಆಡಿಯನ್ಸ್ ಮುಂದೆ ಹೇಳಲು ಹೊರಟಿರುವುದು ಕಾಣುತ್ತದೆ. ಚಿತ್ರತಂಡ ಹೇಳಿದ ಕಥೆಯ ಎಳೆ ಕೂಡ ಚೆನ್ನಾಗಿದೆ. ಕನ್ನಡದಲ್ಲಿ ಇಂಥ ಹೊಸ ಕಥಾಹಂದರದ ಸಿನಿಮಾಗಳು ನಿರಂತರವಾಗಿ ಬರುತ್ತಿರಬೇಕು. ಸಿನಿಮಾದ ಟೈಟಲ್ ಪೋಸ್ಟರ್‌ನಲ್ಲಿ ಇರುವಂಥ ಕುತೂಹಲ ಸಿನಿಮಾದಲ್ಲೂ ಇರಬಹುದು ಎಂಬ ನಿರೀಕ್ಷೆಯಿದೆ. ‘ಪಿಸ್ತೂಲ್’ ಚಿತ್ರತಂಡದಿಂದ ಒಳ್ಳೆಯ ಸಿನಿಮಾ ಹೊರಬರಲಿ’ ಎಂದು ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ
ಇನ್ನು ನಟ, ನಿರ್ಮಾಪಕ, ನಿರ್ದೇಶಕ ಪ್ರಬೀಕ್ ಮೊಗವೀರ್ ಪಿಸ್ತೂಲ್ ಸಿನಿಮಾ ಹಿಂದಿನ ಸಾರಥಿ. ಪಿಸ್ತೂಲ್ ಸಿನಿಮಾಕ್ಕೆ ಕಥೆ ಚಿತ್ರಕಥೆ ಬರೆದಿರುವ ಪ್ರಬೀಕ್ ಮೊಗವೀರ್ ಈ ಚಿತ್ರವನ್ನು ನಿರ್ಮಿಸುತ್ತಿರುವುದರ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಸ್ಕೂಲ್ ರಾಮಾಯಣ, ರಾವೆನ್ ಚಿತ್ರ ನಿರ್ದೇಶನ ಮಾಡಿರುವ ವೇದ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಇನ್ನು ಪಿಸ್ತೂಲ್ ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಔಟ್ ಅಂಡ್ ಔಟ್ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರದ ಸಿನಿಮಾ. ಈ ಚಿತ್ರದಲ್ಲಿ ಹೀರೋ – ಹೀರೋಯಿನ್ ಅಂಥ ಯಾವುದೇ ಪಾತ್ರಗಳಿಲ್ಲ. ಇದರಲ್ಲಿ ಕಥೆಯೇ ಪ್ರಧಾನ ಎನ್ನುವುದು ಚಿತ್ರತಂಡ ಮಾತು. ಒಂದು ಪಿಸ್ತೂಲ್ ನಲ್ಲಿ ಆರು ಬುಲೆಟ್‌ಗಳಿರುವಂತೆ, ಪಿಸ್ತೂಲ್ ಕಥೆಯಲ್ಲಿ ಆರು ಪಾತ್ರಗಳಿರುತ್ತವೆ. ನಟ ಕಂ ನಿರ್ಮಾಪಕ ಪ್ರಬೀಕ್ ಮೊಗವೀರ್ ಪಿಸ್ತೂಲ್ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಉಳಿದಂತೆ ಅನೇಕ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮತ್ತೊಂದು ವಿಶೇಷ ಪಾತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ನಟರೊಬ್ಬರನ್ನು ಅತಿಥಿ ಕಲಾವಿದರನ್ನಾಗಿ ಕರೆತರುವ ಯೋಚನೆಯೂ ಚಿತ್ರತಂಡಕ್ಕಿದೆ.
ಈ ಹಿಂದೆ ಗಡಿಯಾರ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲೂ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದ್ದ ಪ್ರಬೀಕ್ ಮೊಗವೀರ್, ಅದಾದ ನಂತರ ನಿರ್ಮಾಣದ ಜೊತೆಗೆ ನಟನೆಯ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದರು. ಗಡಿಯಾರ ಸಿನಿಮಾದ ಬಳಿಕ ತನಿಖೆ, ಶಾಂತಿಯನ್ನು ಕಳೆದುಕೊಳ್ಳಬೇಡಿ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಪ್ರಬೀಕ್ ನಾಯಿ ಇದೆ ಎಚ್ಚರಿಕೆ, ಅಸುರನ ಕೈಯಲ್ಲಿ ಪಾರಿಜಾತ, ರಾವೆನ್ ಚಿತ್ರಗಳಲ್ಲಿ ಅಭಿನಯಿಸಿದ್ದು, ಆ ಎಲ್ಲಾ ಚಿತ್ರಗಳ ಬಿಡುಗಡೆಗೂ ಮುನ್ನವೇ ಪಿಸ್ತೂಲ್ ಚಿತ್ರದಲ್ಲಿ ಅಭಿನಯಿಸುವುದಕ್ಕೆ ತಯಾರಾಗಿದ್ದಾರೆ.
ಸದ್ಯ ಪಿಸ್ತೂಲ್ ಚಿತ್ರದ ಬಹುತೇಕ ಸ್ಕ್ರಿಪ್ಟ್ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಚಿತ್ರತಂಡದ ಮೂಲಗಳ ಪ್ರಕಾರ, ಇದೇ ವರ್ಷಾಂತ್ಯದೊಳಗೆ ಪಿಸ್ತೂಲ್ ಸಿನಿಮಾ ಸೆಟ್ಟೇರಲಿದ್ದು, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಪಿಸ್ತೂಲ್ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ. ಇನ್ನು ವಸಿಷ್ಠ ಸಿಂಹ ಬಿಡುಗಡೆ ಮಾಡಿರುವ ಪಿಸ್ತೂಲ್’ ಸಿನಿಮಾದ ಟೈಟಲ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿದ್ದು, ಪಿಸ್ತೂಲ್ ಟೈಟಲ್ ಪೋಸ್ಟರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Have any thoughts?

Share your reaction or leave a quick response — we’d love to hear what you think!

You may also like