Home Latest Newsಕೆಎಸ್​ಆರ್​ಟಿಸಿಯ ಈ ಬಸ್​ನಲ್ಲಿ ಇಂದಿನಿಂದ ಸಿಗುತ್ತೆ ನಂದಿನಿ ಸ್ನ್ಯಾಕ್ ಕಿಟ್!

ಕೆಎಸ್​ಆರ್​ಟಿಸಿಯ ಈ ಬಸ್​ನಲ್ಲಿ ಇಂದಿನಿಂದ ಸಿಗುತ್ತೆ ನಂದಿನಿ ಸ್ನ್ಯಾಕ್ ಕಿಟ್!

by shiv
0 comments

ಕರ್ನಾಟಕದ ವಿವಿಧ ನಗರಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕೆಎಸ್​ಆರ್​ಟಿಸಿ ಫ್ಲೈಬಸ್ ಇಂದಿನಿಂದ ಹೊಸದೊಂದು ಕೊಡುಗಡೆಯನ್ನು ಪ್ರಯಾಣಿಕರಿಗೆ ನೀಡುತ್ತಿದೆ. ನಂದಿನಿ ಸ್ನ್ಯಾಕ್ ಕಿಟ್ ವಿತರಣೆ ಇಂದಿನಿಂದ ಶುರುವಾಗುತ್ತಿದೆ. ಏನಿದು ಕೆಎಸ್​ಆರ್​​ಟಿಸಿಯ ಹೊಸ ಯೋಜನೆ? ನಂದಿನಿ ಸ್ನ್ಯಾಕ್ ಕಿಟ್ ಕೊಡುವ ಉದ್ದೇಶವೇನು? ಇಲ್ಲಿದೆ ವಿವರ.

ಬೆಂಗಳೂರು, ನವೆಂಬರ್ 12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಫ್ಲೈಬಸ್ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರಿಗೆ ಇಂದಿನಿಂದ ಕೆಎಂಎಫ್​​ (KMF) ನಂದಿನಿ ಸ್ನ್ಯಾಕ್ ಕಿಟ್ (Nandini Snack Kit) ಸಿಗಲಿದೆ! ಈ ಹೊಸ ಯೋಜನೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಇಂದು ಅಧಿಕೃತ ಚಾಲನೆ ಸಿಗಲಿದೆ. ಜನರ ಪ್ರಯಾಣವನ್ನು ಇನ್ನಷ್ಟು ಉತ್ತಮಗೊಳಿಸುವುದರ ಜತೆಗೆ ಏರ್​ಪೋರ್ಟ್​ಗೆ ತೆರಳುವ ಬಸ್​ಗಳಲ್ಲೂ ವಿಮಾನ ಪ್ರಯಾಣದ ಮಾದರಿಯಲ್ಲೇ ಆತಿಥ್ಯ ನೀಡಬೇಕೆಂಬ ಗುರಿಯೊಂದಿಗೆ ಈ ಉಪಕ್ರಮ ಆರಂಭಿಸಲಾಗುತ್ತಿದೆ ಎಂದು ಕೆಎಸ್​ಆರ್​ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಪ್ರಸಿದ್ಧ ನಂದಿನಿ ಬ್ರ್ಯಾಂಡ್, ಅದರ ಡೈರಿ ಆಧಾರಿತ ತಿಂಡಿಗಳು ಮತ್ತು ಪಾನೀಯಗಳಿಗೆ ಇನ್ನಷ್ಟು ಪ್ರಚಾರ ದೊರೆಯುವಂತೆ ಮಾಡುವ ಮೂಲಕ ಅವುಗಳ ಉತ್ತೇಜನಕ್ಕೂ ಈ ಉಪಕ್ರಮ ಸಹ ಸಹಾಯ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂದಿನಿ ಸ್ನ್ಯಾಕ್ ಕಿಟ್​ನಲ್ಲಿ ಏನೇನಿರಲಿದೆ?

ಫ್ಲೈಬಸ್ ಪ್ರಯಾಣಿಕರಿಗೆ ನೀಡುವ ನಂದಿನಿ ಸ್ನ್ಯಾಕ್ ಕಿಟ್​ನಲ್ಲಿ ಏನೇನು ಉತ್ಪನ್ನಗಳು ಇರಲಿವೆ ಎಂಬುದನ್ನು ಕೆಎಸ್​​ಆರ್​ಟಿಸಿ ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ನಂದಿನಿ ಬ್ರ್ಯಾಂಡ್​ನ ಕೆಲವು ಉತ್ಪನ್ನಗಳು ಇರಲಿವೆ ಎಂದು ತಿಳಿಸಿದೆ.

ಕೆಎಸ್‌ಆರ್‌ಟಿಸಿ ಫ್ಲೈಬಸ್ ಸೇವೆಯು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೈಸೂರು, ಮಂಗಳೂರು, ಮಡಿಕೇರಿ, ಮಣಿಪಾಲ, ಉಡುಪಿ ಮತ್ತು ಕುಂದಾಪುರ ಸೇರಿದಂತೆ ಕರ್ನಾಟಕದ ಹಲವಾರು ಪ್ರಮುಖ ನಗರಗಳು ಮತ್ತು ಪಟ್ಟಣಗಳೊಂದಿಗೆ ಸಂಪರ್ಕಿಸುತ್ತದೆ.

ಕೆಎಸ್‌ಆರ್‌ಟಿಸಿ ತನ್ನ ಪ್ರೀಮಿಯಂ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಉಚಿತ ಬಾಟಲ್ ಕುಡಿಯುವ ನೀರನ್ನು ಈ ಹಿಂದೆ ಒದಗಿಸುತ್ತಿತ್ತು. ಆದರೆ, 2019 ರ ಅಕ್ಟೋಬರ್​​ನಲ್ಲಿ ಮಹಾತ್ಮಾ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನಿಗಮವು ಏಕ-ಬಳಕೆಯ ಪ್ಲಾಸ್ಟಿಕ್ ಬಾಟಲಿಗಳನ್ನು ನೀಡುವುದನ್ನು ಸ್ಥಗಿತಗೊಳಿಸಿತ್ತು.

ದಾವಣಗೆರೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೊಸ ಫ್ಲೈಬಸ್ ಸೇವೆಗೂ ಇಂದು ಚಾಲನೆ ದೊರೆಯುತ್ತಿದೆ. ಈ ಕ್ರಮವು ಕೆಎಸ್‌ಆರ್‌ಟಿಸಿಯ ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸುವ ಮತ್ತು ಎರಡನೇ ಸ್ತರದ ನಗರಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ವಿಸ್ತರಿಸುವ ದೊಡ್ಡ ಗುರಿಗೆ ಪೂರಕವಾಗಿದ ಎಂದು ಸಂಸ್ಥೆ ತಿಳಿಸಿದೆ.

Have any thoughts?

Share your reaction or leave a quick response — we’d love to hear what you think!

You may also like