The Hundred 2025: ದಿ ಹಂಡ್ರೆಡ್ ಲೀಗ್ ಶುರುವಾಗಿದ್ದು 2021 ರಲ್ಲಿ. ಇದು 100 ಎಸೆತಗಳ ಪಂದ್ಯ ಎಂಬುದು ವಿಶೇಷ. ಅಂದರೆ ಟಿ20 ಬದಲಿಗೆ ಇಲ್ಲಿ ಪ್ರತಿ ಇನಿಂಗ್ಸ್ಗೆ 100 ಎಸೆತಗಳನ್ನು ಎಸೆಯಲಾಗುತ್ತದೆ. ಹಾಗೆಯೇ ಒಂದು ಓವರ್ನಲ್ಲಿ 5 ಎಸೆತಗಳು ಇರಲಿವೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂದರೆ ಒಬ್ಬ ಬೌಲರ್ ಸತತ 2 ಓವರ್ ಅಥವಾ 10 ಎಸೆತಗಳನ್ನು ಎಸೆಯಬಹುದು. ಹೀಗೆ ಹಲವು ರೀತಿಯಲ್ಲಿ ವಿಭಿನ್ನವಾಗಿ ಟೂರ್ನಿಗೆ ಇದೀಗ ಐಪಿಎಲ್ ಫ್ರಾಂಚೈಸಿಗಳು ಎಂಟ್ರಿ ಕೊಟ್ಟಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ನ (IPL) ಫ್ರಾಂಚೈಸಿಗಳು ಇದೀಗ ಇಂಗ್ಲೆಂಡ್ ಕ್ರಿಕೆಟ್ ಲೀಗ್ನತ್ತ ಮುಖ ಮಾಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ನಲ್ಲಿ (The Hundred League) ಐಪಿಎಲ್ನ ನಾಲ್ಕು ಫ್ರಾಂಚೈಸಿಗಳು ತಂಡಗಳನ್ನು ಖರೀದಿಸಿದ್ದಾರೆ. ಇದೀಗ ಈ ತಂಡಗಳ ಹೆಸರುಗಳ ಬದಲಾವಣೆಗೆ ಚಾಲನೆ ನೀಡಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದ ನಾರ್ದರ್ನ್ ಸೂಪರ್ಚಾರ್ಜರ್ಸ್ ತಂಡದ ಹೆಸರನ್ನು ಬದಲಿಸಲಾಗಿದ್ದು, ಮುಂದಿನ ಸೀಸನ್ನಿಂದ ಸೂಪರ್ಚಾರ್ಜಸ್ ತಂಡವು ಸನ್ರೈಸರ್ಸ್ ಲೀಡ್ಸ್ ಹೆಸರಿನಲ್ಲಿ ಕಣಕ್ಕಿಳಿಯಲಿದೆ.
ಯಾರ್ಕ್ಷೈರ್ ಒಡೆತನದಲ್ಲಿದ್ದ ನಾರ್ದರ್ನ್ ಸೂಪರ್ಚಾರ್ಜರ್ಸ್ನ ಸಂಪೂರ್ಣ ಪಾಲನ್ನು ಸನ್ ಗ್ರೂಪ್ ಖರೀದಿಸಿತ್ತು. ಹೀಗಾಗಿ ಇದೀಗ ಫ್ರಾಂಚೈಸಿಯ ಹೆಸರನ್ನು ಬದಲಿಸಿದೆ. ಅದರಂತೆ ದಿ ಹಂಡ್ರೆಡ್ ಲೀಗ್ನಲ್ಲೂ ಸನ್ರೈಸರ್ಸ್ ಫ್ರಾಂಚೈಸಿಯ ಫ್ಲಾಗ್ ರಾರಾಜಿಸಲಿದೆ.
ಸನ್ರೈಸರ್ಸ್ ಹೈದರಾಬಾದ್ ಅಲ್ಲದೆ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಓವಲ್ ಇನ್ವಿನ್ಸಿಬಲ್ ತಂಡದ ಶೇ. 49 ರಷ್ಟು ಪಾಲನ್ನು ಖರೀದಿಸಿದೆ. ಈ ಮೂಲಕ ರಿಲಯನ್ಸ್ ಒಡೆತನದ ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ 100 ಎಸೆತಗಳ ಟೂರ್ನಿಗೆ ಕಾಲಿಟ್ಟಿದೆ. ಅಲ್ಲದೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಎಂಐ ಓವಲ್ ಹೆಸರಿನಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಕೂಡ ದಿ ಹಂಡ್ರೆಡ್ ಲೀಗ್ನಲ್ಲಿ ತಂಡವನ್ನು ಖರೀದಿಸಿದ್ದು, ಮ್ಯಾಂಚೆಸ್ಟರ್ ಒರಿಜಿನಲ್ಸ್ ಫ್ರಾಂಚೈಸಿಯ ಶೇ.70 ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ದಿ ಹಂಡ್ರೆಡ್ ಲೀಗ್ನಲ್ಲೂ ಇನ್ಮುಂದೆ ಸೂಪರ್ ಜೈಂಟ್ಸ್ ತಂಡ ಕಾಣಿಸಿಕೊಳ್ಳಲಿದೆ.
ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ-ಮಾಲೀಕರಾದ ಜಿಎಂಆರ್ ಗ್ರೂಪ್ ಕೂಡ ದಿ ಹಂಡ್ರೆಡ್ ಲೀಗ್ಗೆ ಕಾಲಿಟ್ಟಿದ್ದು, ಸದರ್ನ್ ಬ್ರೇವ್ ಫ್ರಾಂಚೈಸಿಯ ಶೇಕಡಾ 49 ರಷ್ಟು ಪಾಲನ್ನು ಖರೀದಿಸಿದೆ. ಹೀಗಾಗಿ ಮುಂಬರುವ ಸೀಸನ್ನಲ್ಲಿ ಕ್ಯಾಪಿಟಲ್ಸ್ ಪಡೆ ಕೂಡ ದಿ ಹಂಡ್ರೆಡ್ ಲೀಗ್ನಲ್ಲಿ ಕಾಣಿಸಿಕೊಳ್ಳಲಿದೆ.
ಸನ್ರೈಸರ್ಸ್ ಫ್ರಾಂಚೈಸಿಯ 3ನೇ ತಂಡ:
ಸನ್ನೆಟ್ವರ್ಕ್ ಗ್ರೂಪ್ನ ಒಡೆತನದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಈಗಾಗಲೇ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ತಂಡವೊಂದನ್ನು ಹೊಂದಿದೆ. ಎಸ್ಎ20 ಲೀಗ್ನಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ಹೆಸರಿನಲ್ಲಿ ತಂಡವೊಂದು ಕಣಕ್ಕಿಳಿಯುತ್ತಿದ್ದು, ಇದೀಗ ಇಂಗ್ಲೆಂಡ್ನಲ್ಲಿ ಸನ್ರೈಸರ್ಸ್ ಲೀಡ್ಸ್ ಹೆಸರಿನಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದೆ. ಸನ್ರೈಸರ್ಸ್ ಹೆಸರಿನಲ್ಲಿರುವ ಮೂರು ತಂಡಗಳು…
- ಸನ್ರೈಸರ್ಸ್ ಹೈದರಾಬಾದ್ (ಇಂಡಿಯನ್ ಪ್ರೀಮಿಯರ್ ಲೀಗ್)
- ಸನ್ರೈಸರ್ಸ್ ಈಸ್ಟರ್ನ್ ಕೇಪ್ (ಸೌತ್ ಆಫ್ರಿಕಾ ಟಿ20 ಲೀಗ್)
- ಸನ್ರೈಸರ್ಸ್ ಲೀಡ್ಸ್ ( ದಿ ಹಂಡ್ರೆಡ್ ಲೀಗ್, ಇಂಗ್ಲೆಂಡ್)
Have any thoughts?
Share your reaction or leave a quick response — we’d love to hear what you think!