Home Internationalಜನವರಿಯಲ್ಲಿ ಭಾರತದ ಗಗನಯಾನ ಮಿಷನ್; ಮಾನವ ಬದಲು ವ್ಯೋಮಿತ್ರ ಪ್ರಯಾಣ

ಜನವರಿಯಲ್ಲಿ ಭಾರತದ ಗಗನಯಾನ ಮಿಷನ್; ಮಾನವ ಬದಲು ವ್ಯೋಮಿತ್ರ ಪ್ರಯಾಣ

by shiv
0 comments

Gaganyaan mission of India: 2027ಕ್ಕೆ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ಗುರಿ ಹೊಂದಿರುವ ಭಾರತ, ಇದಕ್ಕೆ ಮುನ್ನ ಮೂರು ಮಾನವರಹಿತ ಸ್ಪೇಸ್ ಮಿಷನ್ ಕೈಗೊಳ್ಳಲಿದೆ. ಅದರ ಮೊದಲ ಮಿಷನ್ 2025ರೊಳಗೆ ಆರಂಭವಾಗಿತ್ತು. ಇದು ವಿಳಂಬವಾಗಲಿದ್ದು, 2026ರ ಜನವರಿಗೆ ಚಾಲನೆಗೊಳ್ಳಲಿದೆ. ಮೂರು ಮಾನವರಹಿತ ಮಿಷನ್ ಪೂರ್ಣಗೊಂಡ ಬಳಿಕ ಮಾನವ ಸಹಿತ ಮಿಷನ್ ಅನ್ನು ಇಸ್ರೋ ಕೈಗೊಳ್ಳಿದೆ,

ನವದೆಹಲಿ, ನವೆಂಬರ್ 6: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯ ಆರಂಭ ತುಸು ವಿಳಂಬವಾಗಲಿದೆ. ಈ ವರ್ಷದೊಳಗೆ ಗಗನಯಾನ ಮಿಷನ್ (Gaganyaan mission) ಚಾಲನೆಗೊಳ್ಳಬೇಕೆಂದು ಮೊದಲಿಗೆ ಗುರಿ ಇಡಲಾಗಿತ್ತು. ಬೇರೆ ಬೇರೆ ಕಾರಣಗಳಿಗೆ ತುಸು ತಡವಾಗಿ ಆರಂಭವಾಗುವ ಸಾಧ್ಯತೆ ಇದೆ. ಇಸ್ರೋ ಛೇರ್ಮನ್ ವಿ ನಾರಾಯಣನ್ ಅವರು ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ ಜನವರಿಯಲ್ಲಿ (2026) ಗಗನಯಾನ ಮಿಷನ್​ನಲ್ಲಿ ಮೊದಲ ಸ್ಪೇಸ್​ಫ್ಲೈಟ್ ಹಾರಬಹುದು.

ಅಮೆರಿಕದ ನಾಸಾ ಸಂಸ್ಥೆ ಬಾಹ್ಯಾಕಾಶದಲ್ಲಿ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ (ಐಎಸ್​ಎಸ್) ಅನ್ನು ನಿರ್ಮಿಸಿದ ರೀತಿಯಲ್ಲಿ ಭಾರತವೂ ಕೂಡ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ (ಭಾರತೀಯ ಅಂತರಿಕ್ಷ ನಿಲ್ದಾಣ) ನಿರ್ಮಿಸುವ ಯೋಜನೆಯನ್ನು 2028ಕ್ಕೆ ಆರಂಭಿಸುವ ನಿರೀಕ್ಷೆ ಇದೆ. 2027ಕ್ಕೆ ಮಾನವಸಹಿತ ಗಗನಯಾನ ಯೋಜನೆಯನ್ನು (Crewed mission) ನಡೆಸುವ ಗುರಿ ಇಟ್ಟಿದೆ. ಅಷ್ಟರೊಳಗೆ ಮಾನವರಹಿತವಾದ  (Uncrewed mission) ಮೂರು ಸ್ಪೇಸ್​ಫ್ಲೈಟ್ ಕೈಗೊಳ್ಳಲಾಗುತ್ತದೆ.

2027ಕ್ಕೆ ಗಗನಯಾನದಲ್ಲಿ ಮನುಷ್ಯರನ್ನು ಕಳುಹಿಸುವ ಮುನ್ನ ಈ ಮೂರೂ ಮಾನವರಹಿತ ಮಿಷನ್ ಪೂರ್ಣಗೊಳಿಸಲಾಗುತ್ತದೆ. ಅದಕ್ಕಾಗಿ, ವ್ಯೋಮಿತ್ರ ಎನ್ನುವ ಮಾನವ ರೂಪದ ರೋಬೋವನ್ನು ನಿರ್ಮಿಸಲಾಗಿದೆ. ಈ ಮೂರೂ ಮಿಷನ್​ಗಳಲ್ಲಿ ವ್ಯೋಮಿತ್ರ ಪ್ರಯಾಣಿಸಲಿದ್ದು, ಬಾಹ್ಯಾಕಾಶದಲ್ಲಿ ಮನುಷ್ಯರ ಇರುವಿಕೆಗೆ ಇಷ್ಟ ಕಷ್ಟವಾಗುವ ಅಂಶಗಳೇನು ಎಂಬುದನ್ನು ಈ ವ್ಯೋಮಿತ್ರ ಸಹಾಯದಿಂದ ವಿವಿಧ ಪ್ರಯೋಗಗಳ ಮೂಲಕ ತಿಳಿದುಕೊಳ್ಳುವ ಪ್ರಯತ್ನ ನಡೆಯುತ್ತದೆ. ಮನುಷ್ಯರ ಪ್ರಯಾಣ ನೂರಕ್ಕೆ ನೂರು ಸುರಕ್ಷಿತ ಎಂಬುದು ಖಾತ್​ರಿಯಾದ ಬಳಿಕವಷ್ಟೇ ಮಾನವಸಹಿತ ಗಗನಯಾನ ಮಿಷನ್ ಕೈಗೊಳ್ಳಲಾಗುತ್ತದೆ.

ಇಸ್ರೋ ಛೇರ್ಮನ್ ವಿ ನಾರಾಯಣನ್ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ, ಗಗನಯಾನ ಮಿಷನ್​ನ ಭಾಗವಾಗಿ 8,000ಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಎಲ್ಲಾ ಅಗತ್ಯ ತಯಾರಿ ನಡೆಯುತ್ತಿದೆ. ಗಗನನೌಕೆಗೆ ಬೇಕಾದ ಎಲ್ಲಾ ಹಾರ್ಡ್​ವೇರ್ ಭಾಗಗಳು ಸತೀಶ್ ಧವನ್ ಸ್ಪೇಸ್ ಸೆಂಟರ್​ನಲ್ಲಿ ತಲುಪಿವೆ. ಅವುಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ.

ಮೊದಲ ಮಾನವರಹಿತ ಗಗನಯಾನ್ ಮಿಷನ್ ಡಿಸೆಂಬರ್​ನಲ್ಲಿ ಶುರುವಾಗಬೇಕಿತ್ತು. ಇದರ ಬದಲು ಜನವರಿಯಲ್ಲಿ ಶುರುವಾಗಿ ಮಾರ್ಚ್ ಅಥವಾ ಏಪ್ರಿಲ್​ವರೆಗೂ ಮಿಷನ್ ಇರುತ್ತದೆ. ಅದಕ್ಕೆ ಜಿ1 ಮಿಷನ್ ಎಂದು ಹೆಸರಿಡಲಾಗಿದೆ. ಅದಾದ ಬಳಿಕ ಜಿ2 ಮತ್ತು ಜಿ3 ಮಿಷನ್ ನಡೆಯುತ್ತವೆ.

ಮೂರೇ ದೇಶಗಳಿಂದ ಮಾತ್ರ ಈ ಸಾಧನೆ

ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಿರುವ ದೇಶಗಳ ಸಂಖ್ಯೆ ಮೂರೇ ಇರುವುದು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಸಾಮರ್ಥ್ಯ ತೋರಿವೆ. 2027ಕ್ಕೆ ಭಾರತದ ಗಗನಯಾನ ಯೋಜನೆ ಯಶಸ್ವಿಯಾದರೆ ಈ ಪಟ್ಟಿಗೆ ಭಾರತ 4ನೇ ದೇಶವಾಗಿ ಸೇರ್ಪಡೆಯಾಗುತ್ತದೆ. ಭೂಮಿಯಿಂದ 400 ಕಿಮೀ ಎತ್ತರದ ಕಕ್ಷೆಗೆ ಗಗನಯಾನ ನೌಕೆ ಹೋಗುತ್ತದೆ. 2-3 ಮಂದಿ ಗಗನಯಾತ್ರಿಕರನ್ನು ಕರೆದೊಯ್ಯುವ ಗುರಿ ಇದೆ.

Have any thoughts?

Share your reaction or leave a quick response — we’d love to hear what you think!

You may also like