Pakistan vs Sri Lanka: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ನ್ಯಾಯಾಲಯದ ಹೊರಗೆ ಮಂಗಳವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದರು. ಅಲ್ಲದೆ 27 ಜನರು ಗಾಯಗೊಂಡಿದ್ದಾರೆ. ಈ ದಾಳಿಯ ಬೆನ್ನಲ್ಲೇ ಶ್ರೀಲಂಕಾ ತಂಡದ ಕೆಲ ಆಟಗಾರರು ತವರಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನ್ ಮತ್ತು ಶ್ರೀಲಂಕಾ ನಡುವಣ ಇಂದು (ನ.13) ನಡೆಯಬೇಕಿದ್ದ ಎರಡನೇ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಮಂಗಳವಾರ ಇಸ್ಲಾಮಾಬಾದ್ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಶ್ರೀಲಂಕಾ ತಂಡದ 8 ಆಟಗಾರರು ತವರಿಗೆ ಮರಳುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ಲಂಕಾ ತಂಡದ ಎಂಟು ಆಟಗಾರರು ಕೊಲಂಬೊಗೆ ಪ್ರಯಾಣಿಸಿದ್ದಾರೆ ಎಂದು ವರದಿಯಾಗಿದೆ. ಇದೇ ಕಾರಣದಿಂದಾಗಿ ಗುರುವಾರ ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಪಾಕಿಸ್ತಾನ್ ಮತ್ತು ಶ್ರೀಲಂಕಾ ನಡುವಣ 2ನೇ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಸರಣಿಗೆ ದಿನಾಂಕ ಮರುನಿಗದಿ:
ಶ್ರೀಲಂಕಾದ ಕೆಲ ಆಟಗಾರರು ತಮ್ಮ ಸುರಕ್ಷತಾ ಕಾಳಜಿಯನ್ನು ಉಲ್ಲೇಖಿಸಿ ತವರಿಗೆ ಮರಳಿದ್ದರೂ ಈ ಸರಣಿಯನ್ನು ಮುಂದುವರೆಸುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಈ ಹಿನ್ನಲೆಯಲ್ಲಿ ಇದೀಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಉಳಿದ ಪಂದ್ಯಗಳ ದಿನಾಂಕವನ್ನು ಮರುನಿಗದಿ ಮಾಡಿದೆ.
ಅದರಂತೆ ಇಂದು ನಡಯಬೇಕಿದ್ದ 2ನೇ ಏಕದಿನ ಪಂದ್ಯವನ್ನು ಶುಕ್ರವಾರ ಆಡಲಾಗುತ್ತದೆ ಎಂದು ತಿಳಿಸಲಾಗಿದೆ. ಹಾಗೆಯೇ ನವೆಂಬರ್ 15 ಕ್ಕೆ ನಿಗದಿಯಾಗಿದ್ದ ಮೂರನೇ ಮ್ಯಾಚ್ ಭಾನುವಾರ ನಡೆಯಲಿದೆ. ಈ ಮೂಲಕ ಸರಣಿಯನ್ನು ಪೂರ್ಣಗೊಳಿಸಲು ಪಿಸಿಬಿ ಪ್ಲ್ಯಾನ್ ರೂಪಿಸಿದೆ.
ಬದಲಿ ಆಟಗಾರರ ಎಂಟ್ರಿ:
ಶ್ರೀಲಂಕಾ ಏಕದಿನ ತಂಡದಲ್ಲಿದ್ದ 8 ಆಟಗಾರರು ಪಾಕ್ನಲ್ಲಿನ ಉಗ್ರರ ದಾಳಿಯಿಂದ ಭಯಭೀತರಾಗಿ ತವರಿಗೆ ಮರಳಿದ್ದಾರೆ. ಇದೀಗ ಅವರ ಬದಲಿಗೆ ಆಟಗಾರರನ್ನು ಕಳುಹಿಸಿ ಕೊಡುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಹೀಗಾಗಿಯೇ ಇಂದು (ನ.13) ನಡೆಯಬೇಕಿದ್ದ ಪಂದ್ಯವನ್ನು ಮರು ನಿಗದಿ ಮಾಡಲಾಗಿದೆ.
ಅಂದರೆ ಶ್ರೀಲಂಕಾದಿಂದ ಕೆಲ ಆಟಗಾರರು ಇಂದು ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆಯಿದ್ದು, ನಾಳೆಯೊಳಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಈ ಮೂಲಕ ಸರಣಿಯನ್ನು ಪೂರ್ಣಗೊಳಿಸಲು ಉಭಯ ಕ್ರಿಕೆಟ್ ಮಂಡಳಿ ಮುಂದಾಗಿದೆ.
ಏಕದಿನ ಸರಣಿ ಬಳಿಕ ತ್ರಿಕೋನ ಸರಣಿ:
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಬಳಿಕ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮೂರು ತಂಡಗಳ ನಡುವಣ ತ್ರಿಕೋನ ಟಿ20 ಸರಣಿಯನ್ನು ಆಯೋಜಿಸಲಿದೆ. ಈ ಸರಣಿಯಲ್ಲಿ ಪಾಕಿಸ್ತಾನ್, ಶ್ರೀಲಂಕಾ ಮತ್ತು ಝಿಂಬಾಬ್ವೆ ತಂಡಗಳು ಕಣಕ್ಕಿಳಿಯಲಿವೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ…
ಟ್ರೈ-ಸೀರೀಸ್ 2025 ವೇಳಾಪಟ್ಟಿ:
- ನವೆಂಬರ್ 17: ಪಾಕಿಸ್ತಾನ್ vs ಝಿಂಬಾಬ್ವೆ (ರಾವಲ್ಪಿಂಡಿ)
- ನವೆಂಬರ್ 18: ಶ್ರೀಲಂಕಾ vs ಝಿಂಬಾಬ್ವೆ (ರಾವಲ್ಪಿಂಡಿ)
- ನವೆಂಬರ್ 22: ಪಾಕಿಸ್ತಾನ್ vs ಶ್ರೀಲಂಕಾ (ಲಾಹೋರ್)
- ನವೆಂಬರ್ 23: ಪಾಕಿಸ್ತಾನ್ vs ಝಿಂಬಾಬ್ವೆ (ಲಾಹೋರ್)
- ನವೆಂಬರ್ 25: ಶ್ರೀಲಂಕಾ v ಝಿಂಬಾಬ್ವೆ (ಲಾಹೋರ್)
- ನವೆಂಬರ್ 27: ಪಾಕಿಸ್ತಾನ್ vs ಶ್ರೀಲಂಕಾ (ಲಾಹೋರ್)
- ನವೆಂಬರ್ 29: ಫೈನಲ್ (ಲಾಹೋರ್)
Have any thoughts?
Share your reaction or leave a quick response — we’d love to hear what you think!