Home EntertainmentIND vs SA: 5 ವಿಕೆಟ್​ಗಳ ಗೊಂಚಲು ಪಡೆದ ಬುಮ್ರಾ; 159 ರನ್​ಗಳಿಗೆ ಆಫ್ರಿಕಾ ಆಲೌಟ್

IND vs SA: 5 ವಿಕೆಟ್​ಗಳ ಗೊಂಚಲು ಪಡೆದ ಬುಮ್ರಾ; 159 ರನ್​ಗಳಿಗೆ ಆಫ್ರಿಕಾ ಆಲೌಟ್

by shiv
0 comments

Jasprit Bumrah 5 wickets: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತಂಡ ಕೇವಲ 159 ರನ್‌ಗಳಿಗೆ ಆಲೌಟ್ ಆಗಿದೆ. ಬುಮ್ರಾ 5 ವಿಕೆಟ್‌ಗಳ ಗೊಂಚಲು ಪಡೆದರು. ಆಫ್ರಿಕಾ ತಂಡದಿಂದ ಒಂದೇ ಒಂದು ಅರ್ಧಶತಕದ ಇನ್ನಿಂಗ್ಸ್ ಕೂಡ ಮೂಡಿಬಂದಿಲ್ಲ. ಐಡೆನ್ ಮಾರ್ಕ್ರಾಮ್ 31 ರನ್ ಗಳಿಸಿದರು, ಆದರೆ ಉಳಿದವರು ವಿಫಲರಾದರು. ಭಾರತ ಬೌಲರ್‌ಗಳ ಪ್ರಾಬಲ್ಯದಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಕೋಲ್ಕತ್ತಾದ ಈಡನ್ ಗಾರ್ಡನ್ಸ್ (Eden Gardens) ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 159 ರನ್​ಗಳಿಗೆ ಆಲೌಟ್ ಆಗಿದೆ. ಭಾರತದ ಕರಾರುವಕ್ಕಾದ ದಾಳಿಗೆ ನಲುಗಿದ ಆಫ್ರಿಕಾ ತಂಡದಿಂದ (India vs South Africa) ಒಂದೇ ಒಂದು ಅರ್ಧಶತಕದ ಇನ್ನಿಂಗ್ಸ್ ಕೂಡ ಮೂಡಿಬರಲಿಲ್ಲ. ತಂಡದ ಪರ ಆರಂಭಿಕ ಐಡೆನ್ ಮಾರ್ಕ್ರಾಮ್ 31 ರನ್​ಗಳ ಗರಿಷ್ಠ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ, ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಇತ್ತ ಭಾರತದ ಪರ ಮಾರಕ ಬೌಲಿಂಗ್ ಮಾಡಿದ ಬುಮ್ರಾ 5 ವಿಕೆಟ್​ಗಳ ಗೊಂಚಲು ಪಡೆದರು.

ಆಫ್ರಿಕಾಗೆ ಉತ್ತಮ ಆರಂಭ

ಈ ಪಂದ್ಯದಲ್ಲಿ ತೆಂಬಾ ಬವುಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಐಡೆನ್ ಮಾರ್ಕ್ರಾಮ್ ಮತ್ತು ರಯಾನ್ ರಿಕಲ್ಟನ್ ಅವರ ಆರಂಭಿಕ ಜೋಡಿ ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಆರಂಭವನ್ನು ನೀಡಿತು. ಇವರಿಬ್ಬರ ಜೊತೆಯಾಟದಿಂದಾಗಿ ಆಫ್ರಿಕಾ ತಂಡದ ಸ್ಕೋರ್ ಮೊದಲ 10 ಓವರ್‌ಗಳಲ್ಲಿ 50 ರ ಗಡಿ ದಾಟಿತು. ಈ ವೇಳೆ 11ನೇ ಓವರ್ ಬೌಲ್ ಮಾಡಲು ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ಆರಂಭಿಕ ರಯಾನ್ ರಿಕಲ್ಟನ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು.

ಬುಮ್ರಾ ದಾಳಿಗೆ ಆಫ್ರಿಕಾ ತತ್ತರ

ಆ ನಂತರ ಮತ್ತೊಬ್ಬ ಆರಂಭಿಕ ಐಡೆನ್ ಮಾರ್ಕ್ರಾಮ್ ಅವರನ್ನು ಬುಮ್ರಾ ಔಟ್ ಮಾಡಿದರು. ರಿಕಲ್ಟನ್ 23 ರನ್‌ ಬಾರಿಸಿ ಔಟಾದರೆ, ಮಾರ್ಕ್ರಾಮ್ 31 ರನ್‌ ಗಳಿಸಿ ಔಟಾದರು. ನಂತರ ಕುಲ್ದೀಪ್ ಯಾದವ್, ನಾಯಕ ತೆಂಬ ಬವುಮಾ ಅವರನ್ನು ಪೆವಿಲಿಯನ್​ಗಟ್ಟಿದರು. ಬವುಮಾ ಕೇವಲ ಮೂರು ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಮೊದಲ ದಿನದ ಊಟದ ವಿರಾಮದ ವೇಳೆಗೆ ದಕ್ಷಿಣ ಆಫ್ರಿಕಾ ಮೂರು ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು.

3ನೇ ಸೆಷನ್​ನಲ್ಲೇ ಆಫ್ರಿಕಾ ಆಲೌಟ್

ಎರಡನೇ ಸೆಷನ್ ಆರಂಭದಲ್ಲೇ ಕುಲ್ದೀಪ್ ಯಾದವ್ ವಿಯಾನ್ ಮುಲ್ಡರ್ ಅವರನ್ನು ಔಟ್ ಮಾಡಿದರು. ಟೋನಿ ಡಿ ಜಾರ್ಜಿ ಕೂಡ 24 ರನ್ ಬಾರಿಸಿ ಬುಮ್ರಾಗೆ ಬಲಿಯಾದರು. ನಂತರ ದಾಳಿಗಿಳಿದ ಮೊಹಮ್ಮದ್ ಸಿರಾಜ್, ದಕ್ಷಿಣ ಆಫ್ರಿಕಾಕ್ಕೆ ಸತತ ಎರಡು ಹೊಡೆತಗಳನ್ನು ನೀಡಿದರು. ಮೊದಲು ಕೈಲ್ ವೆರೆನ್ ಅವರ ವಿಕೆಟ್ ಪಡೆದ ಸಿರಾಜ್, ನಂತರ ಮಾರ್ಕೊ ಯಾನ್ಸೆನ್ ಅವರನ್ನು ಔಟ್ ಮಾಡಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ 7 ವಿಕೆಟ್‌ ಕಳೆದುಕೊಂಡು 154 ರನ್​ಗಳ ಗಡಿ ದಾಟಿತು.

ಮೂರನೇ ಸೆಷನ್ ಆರಂಭವಾದ ಕೆಲವೇ ಹೊತ್ತಿನಲ್ಲಿ ಆಫ್ರಿಕಾ ತಂಡ ಕೇವಲ 5 ರನ್​ಗಳಿಗೆ ಉಳಿದ ಎರಡು ವಿಕೆಟ್​ಗಳನ್ನು ಕಳೆದುಕೊಂಡು 159 ರನ್​ಗಳಿಗೆ ಆಲೌಟ್ ಆಯಿತು. ಭಾರತದ ಪರ ಬುಮ್ರಾ ಅತ್ಯಧಿಕ ಐದು ವಿಕೆಟ್‌ಗಳನ್ನು ಕಬಳಿಸಿದರೆ, ಮೊಹಮ್ಮದ್ ಸಿರಾಜ್ ಮತ್ತು ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್‌, ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು.

Have any thoughts?

Share your reaction or leave a quick response — we’d love to hear what you think!

You may also like